ಮೆರೆಮಿಂಡಯ್ಯ : -	
12ನೆಯ ಶತಮಾನದಲ್ಲಿದ್ದ ಶಿವಶರಣ ಹಾಗೂ ವಚನಕಾರ. ಈತ ಬಸವಣ್ಣನವರಿಗಿಂತ ಹಿಂದಿನವ ಎಂಬ ಅಭಿಪ್ರಾಯವೂ ಇದೆ. ಈತನ ಹೆಸರಿನಲ್ಲಿ ಇಲ್ಲಿಯ ತನಕ 101 ವಚನಗಳು ದೊರೆತಿವೆ. ವಿಘಟದೂರ ರಾಮೇಶ್ವರಲಿಂಗ ಎಂಬುದು ಈತನ ಅಂಕಿತ. ಅಸಿಯಾಗಲಿ, ಕೃಷಿಯಾಗಲಿ, ಮಸಿಯಾಗಲಿ ಮಾಡುವಲ್ಲಿ ಹುಸಿಯಿಲ್ಲದಿರಬೇಕು; ಅದು ಅಸಮಾಕ್ಷನ ಬರವು, ಪಶುಪತಿಯ ಇರವು ವಿಘಟದೂರ ರಾಮೇಶ್ವರಲಿಂಗವು ತಾನೇ - ಎಂಬ ವಚನದಲ್ಲಿ ಅಸಿಯಿಂದ ಯೋಧರು ಕೃಷಿಯಿಂದ ಶ್ರಮಜೀವಿಗಳು ಮಸಿಯಿಂದ ಬುದ್ಧಿಜೀವಿಗಳು ಎಚ್ಚರಗೊಳ್ಳಬೇಕೆಂದು ಹೇಳಿ - ಈ ಮೂರು ಕಾಯಕದಲ್ಲಿ ಯಾವುದನ್ನೇ ಅವಲಂಬಿಸಿರಲಿ, ಆದರೆ ಅಲ್ಲಿ ಎಲ್ಲಿಯೂ ಹುಸಿಯದಿರಲಿ ಎಂದು ತಿಳಿಸಿದ್ದಾನೆ. ಇಂಥ ಹಲವು ಸ್ಫಟಿಕಶುದ್ಧ ಮಾತುಗಳು ಇವನ ವಚನಗಳಲ್ಲಿ ಹೊರಹೊಮ್ಮಿವೆ.  

	ಮೆರೆಮಿಂಡಯ್ಯ ಎಂಬ ಹೆಸರಿನ ಇನ್ನೊಬ್ಬ ವ್ಯಕ್ತಿಯಿದ್ದು ಈತ ಅರುವತ್ತು ಮೂರು ಪುರಾತನರಲ್ಲಿ ಒಬ್ಬನಾಗಿದ್ದು 8ನೆಯ ಶತಮಾನದಲ್ಲಿ ಜೀವಿಸಿದ್ದಂತೆ ತಿಳಿಯುತ್ತದೆ. ಈತನನ್ನು ಕುರಿತು ಹರಿಹರ ಒಂದು ರಗಳೆ ಬರೆದಿದ್ದಾನೆ. ಈತನೂ ವಚನಕಾರ ಮೆರೆಮಿಂಡಯ್ಯನೂ ಒಬ್ಬನೇ ಎಂದೂ ಇಬ್ಬರೂ ಭಿನ್ನ ವ್ಯಕ್ತಿಗಳೆಂದೂ ವಿದ್ವಾಂಸರಲ್ಲಿ ಭಿನ್ನಾಭಿಪ್ರಾಯವಿದೆ.   	      
  *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ